ಹೈಲೆ ಸೆಲಸ್ಸಿ
	1891-1975. ಅಬಿಸೀನಿಯದ ದೊರೆ. ಇಥಿಯೋಪಿ ಯದ ರಾಜಶ್ರೇಷ್ಠನೆಂದೂ ಜೂಡದ ಸಿಂಹನೆಂತಲೂ ಖ್ಯಾತಿಗಳಿಸಿದ ಈತ 1891 ಜುಲೈ 17ರಂದು ಜನಿಸಿದ. ಹರ್ರಾರ್‍ನ ಶಾಲೆಯೊಂದರಲ್ಲಿ ಇವನ ವಿದ್ಯಾಭ್ಯಾಸ ಜರುಗಿತು. ರಾಸ್ ಮೈಕೇಲ್‍ನ ಮೊಮ್ಮಗಳಾದ ಮೈಚಿರೊಮಾನಿನ್‍ಳನ್ನು ಮದುವೆಯಾದ (1912). 1930 ನವೆಂಬರ್ 2ರಂದು ಈತ ಅಬಿಸೀನಿಯದ ಚಕ್ರವರ್ತಿಯಾದ. ಅಬಿಸೀನಿಯವನ್ನು ಆಧುನಿಕ ರಾಷ್ಟ್ರವನ್ನಾಗಿ ಮಾಡಿದ. 1923ರಲ್ಲಿ ಅಬಿಸೀನಿಯಕ್ಕೆ ಲೀಗ್ ಆಫ್ ನೇಷನ್ಸ್‍ನಲ್ಲಿ ಸದಸ್ಯತ್ವ ದೊರಕಿತು. ಆದರೆ 1936ರಲ್ಲಿ ಅಬಿಸೀನಿಯದ ಮೇಲೆ ಇಟಲಿಯ ಮಸ್ಸೋಲಿನಿ ದಾಳಿ ಮಾಡಿ ವಿಕ್ಟರ್ ಎಮ್ಯಾನ್ಯುಯಲ್‍ನನ್ನು ಅಬಿಸೀನಿಯದ ಚಕ್ರವರ್ತಿಯಾಗಿ ಘೋಷಿಸಿದ. ಲೀಗ್ ಆಫ್ ನೇಷನ್ಸ್ ಪ್ರತಿಭಟಿಸಿದರೂ ಪ್ರಯೋಜನವಾಗಲಿಲ್ಲ. ಇದರಿಂದಾಗಿ ಈತ ಅಡಿಸ್ ಅಬಾಬದಿಂದ ಓಡಿಹೋಗಬೇಕಾಯಿತು. ಎರಡನೆಯ ಮಹಾ ಯುದ್ಧದಲ್ಲಿ (1939-45) ಅಬಿಸೀನಿಯ ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆಯಿತು. ಈತ ಪುನಃ ಚಕ್ರವರ್ತಿಯಾದ. 1975ರಲ್ಲಿ ಈತ ನಿಧನನಾದ.

											(ಎಸ್.ಕೆ.ಕೆ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ